ವಿಷಯಕ್ಕೆ ಹೋಗು

ಸಮುದ್ರ ಮಂಥನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಮುದ್ರಮಥನ ಇಂದ ಪುನರ್ನಿರ್ದೇಶಿತ)
ಕಾಂಬೋಡಿಯದಲ್ಲಿನ ಅನ್ಗ್ಕೊರ್ ವಾಟ್ನಲ್ಲಿ ಚಿತ್ರಿಸಿರುವ ಸಮುದ್ರ ಮಂಥನ

ಹಿಂದೂ ಧರ್ಮದಲ್ಲಿ, ಸಮುದ್ರಮಂಥನ ಅಥವಾ ಕ್ಷೀರಸಮುದ್ರವನ್ನು ಕಡೆದ ಘಟನೆ ಪುರಾಣಗಳಲ್ಲಿ ಒಂದು ಅತ್ಯಂತ ಪ್ರಸಿದ್ದ ಪ್ರಸಂಗ ಹಾಗೂ ಇದನ್ನು ಅತ್ಯಂತ ವೈಭವದಿಂದ ೧೨ ವರ್ಷಗಳಿಗೊಮ್ಮೆ ಕುಂಭ ಮೇಳ ಎಂಬ ಹಬ್ಬವಾಗಿ ಆಚರಿಸಲಾಗುತ್ತದೆ. ಈ ಕಥೆಯು ಭಾಗವತ ಪುರಾಣ, ಮಹಾಭಾರತ ಹಾಗೂ ವಿಷ್ಣು ಪುರಾಣದಲ್ಲಿ ಕಂಡುಬರುತ್ತದೆ. ಹಾಗೂ ಇದನು ಪ್ರೀತಂ ಬಿ ಉ ಶಿಕಾರಿಪುರ ರವರು ಬರೆದಿದ್ದಾರೆ

ಸಮುದ್ರಮಂಥನದ ಇತರ ಹೆಸರುಗಳು —

  • ಸಮುದ್ರಮಂಥನಂಮಂಥನಂ ಎಂದರೆ ಸಂಸ್ಕೃತದಲ್ಲಿ ಮಂಥನ ಅಥವಾ 'ಕಡೆಯುವುದು' ಎಂದರ್ಥ.
  • ಸಾಗರ ಮಂಥನಸಾಗರ ಸಮುದ್ರ ಕ್ಕೆ ಇನ್ನೊಂದು ಹೆಸರು.
  • ಕ್ಷೀರಸಾಗರ ಮಂಥನಕ್ಷೀರಸಾಗರ ಎಂದರೆ ಹಾಲಿನ ಸಮುದ್ರವೆಂದು. ಕ್ಷೀರಸಾಗರ = ಕ್ಷೀರ (ಹಾಲು) + ಸಾಗರ (ಸಮುದ್ರ).

ಸಮುದ್ರಮಂಥನದ ಕಥೆ[ಬದಲಾಯಿಸಿ]

ಸಮುದ್ರ ಮಂಥನದಲ್ಲಿ ವಿಷ್ಣುವಿನ ಕೂರ್ಮ ಅವತಾರ, ವಾಸುಕಿ ಸುತಿಕೊಂಡಿರುವ ಮಂದಾರ ಪರ್ವತದ ಕೆಳಗೆ.. ca 1870.

ದೇವತೆಗಳ ರಾಜ ಇಂದ್ರ, ತನ್ನ ಆನೆಯ ಮೇಲೆ ಸವಾರಿ ಮಾಡುವಾಗ, ದೂರ್ವಾಸ ಎಂಬ ಋಷಿಯು ಇಂದ್ರನಿಗೆ ಒಂದು ವಿಶೇಷ ಮಾಲೆಯನ್ನು ಕೊಟ್ಟರು. ಇಂದ್ರ ಮಾಲೆಯನ್ನು ಸ್ವೀಕರಿಸಿ ಅದನ್ನು ಆನೆಯ ಸೊಂಡಿಲಿನ ಮೇಲೆ ಇಟ್ಟನು. ಆನೆಗೆ ಹೂಮಾಲೆಯ ಗಂಧದಿಂದ ಕಿರುಕುಳ ಉಂಟಾಗಿ ಮಾಲೆಯನ್ನು ನೆಲಕ್ಕೆ ಹಾಕಿತು. ಈ ಹಾರವು ಸಿರಿ ಮತ್ತು ಭಾಗ್ಯದ ಸಂಕೇತವಾಗಿದ್ದು, ಅದನ್ನು ಪ್ರಸಾದವಾಗಿ ಕಾಣಬೇಕಿತ್ತು, ಅಪಮಾನದಿಂದ ಕ್ರೋಧಿತರಾದ ದೂರ್ವಾಸ ಮುನಿಗಳು ಇಂದ್ರ ಹಾಗೂ ಎಲ್ಲ ದೇವತೆಗಳ ಶಕ್ತಿ, ಸಾಮರ್ಥ್ಯ ಹಾಗೂ ಭಾಗ್ಯಗಳು ಕಳೆದುಹೋಗಲಿ ಎಂದು ಶಾಪ ನೀಡಿದರು.

ನಂತರ ದೇವತೆಗಳು ಅಸುರರೊಂದಿಗೆ ಯುದ್ಧದಲ್ಲಿ ಸೋಲನ್ನು ಒಪ್ಪಿದರು. ಅಸುರರ ರಾಜ ಬಲಿ ಲೋಕವನ್ನು ತನ್ನ ವಶಕ್ಕೆ ತೆಗೆದುಕೊಂಡ. ದೇವತೆಗಳು ವಿಷ್ಣುವಿನ ಮೊರೆಹೋದರು. ವಿಷ್ಣು ರಾಜತಾಂತ್ರಿಕತೆಯಿಂದ ಅಸುರರೊಡನೆ ವ್ಯವಹರಿಸಲು ಹೇಳಿದ. ದೇವತೆಗಳು ಅಸುರರೊಂದಿಗೆ ಒಪ್ಪಂದ ಮಾಡಿಕೊಂಡು ಸಮುದ್ರವನ್ನು ಅಮೃತಕ್ಕಾಗಿ ಕಡೆದು ಅದನ್ನು ತಮ್ಮಲ್ಲಿ ಹಂಚಿಕೊಳ್ಳಲು ಒಪ್ಪಿಕೊಂಡರು. ಆದರೆ ಅಮೃತವು ದೇವತೆಗಳಿಗೆ ಮಾತ್ರ ದಕ್ಕುವಂತೆ ಮಾಡುವುದಾಗಿ ವಿಷ್ಣು ದೇವತೆಗಳಿಗೆ ಹೇಳಿದ.

ಕ್ಷೀರಸಾಗರದ ಮಂಥನ[ಬದಲಾಯಿಸಿ]

ಕ್ಷೀರಸಮುದ್ರ ಮಂಥನ ಒಂದು ಸುದೀರ್ಘವಾದ ಪ್ರಕ್ರಿಯೆ. ಕಡೆಗೋಲಾಗಿ ಮಂದರಾಚಲವನ್ನೂ, ಹಗ್ಗವಾಗಿ ಸರ್ಪಗಳ ರಾಜ ವಾಸುಕಿಯನ್ನೂ ಬಳಸಲಾಯಿತು. ದೇವತೆಗಳು ಹಾವಿನ ಬಾಲವನ್ನು ಮತ್ತು ಅಸುರರು ಹಾವಿನ ಹೆಡೆಯನ್ನು ಹಿಡಿದರು. ಹಾವನ್ನು ಒಮ್ಮೆ ಅಸುರರು ಒಮ್ಮೆ ದೇವತೆಗಳು ಎಳೆದರು. ಇದರಿಂದ ಬೆಟ್ಟವು ತಿರುಗತೊಡಗಿತು. ಸಮುದ್ರಮಂಥನ ಪ್ರಾರಂಭವಾಯಿತು. ಆದರೆ, ಬೆಟ್ಟವು ಸಾಗರದಲ್ಲಿ ಕುಸಿಯತೊಡಗಿತು. ವಿಷ್ಣು ಒಂದು ಆಮೆಯಾಗಿ ತನ್ನ ಎರಡನೇ ಕೂರ್ಮ ಅವತಾರ ತಾಳಿ ತನ್ನ ಬೆನ್ನಿನ ಮೇಲೆ ಬೆಟ್ಟವನ್ನು ಹೊತ್ತನು.

ಮಹಾಭಾರತದಲ್ಲಿನ ಕಥೆ ಪುರಾಣಗಳಲ್ಲಿನವುಗಳಿಗಿಂತ (ಭಾಗವತ, ಬ್ರಹ್ಮವೈವರ್ತ) ಭಿನ್ನವಾಗಿದೆ. ಉದಾಹರಣೆಗೆ, ಮಹಾಭಾರತದಲ್ಲಿ ಆಮೆಯ ರೂಪವನ್ನು ವಿಷ್ಣು ಧರಿಸುವುದಿಲ್ಲ. ಅಲ್ಲಿ ಆಮೆಗಳ ರಾಜನಾದ ಅಕೂಪಾರನು, ದೇವತೆಗಳ ಹಾಗು ಅಸುರರ ಬೇಡಿಕೆಯ ಮೇರೆಗೆ ಅದನ್ನು ನಿಭಾಯಿಸುತ್ತಾನೆ.

ಹಾಲಾಹಲ ('ಕಾಲಕೂಟ')[ಬದಲಾಯಿಸಿ]

ದೇವತೆಗಳು ಹಾಗೂ ಅಸುರರು ಸಮುದ್ರಮಥನ ಮಾಡುವಾಗ, ಒಂದು ಕೊಡ ವಿಷವು , ಹಾಲಾಹಲ, ಸಮುದ್ರದಿಂದ ಹೊರಬಂತು. ಇದರಿಂದ ದೇವತೆಗಳು ಹಾಗೂ ಅಸುರರು ಭಯಭೀತರಾದರು, ಏಕೆಂದರೆ ಈ ವಿಷವು ಸೃಷ್ಟಿಯನ್ನೇ ನಾಶ ಮಾಡುವಷ್ಟು ಪ್ರಭಾವಶಾಲಿ. ವಿಷ್ಣುವಿನ ಸಲಹೆ ಮೇರೆಗೆ, ದೇವತೆಗಳು ಶಿವನ ಬಳಿ ರಕ್ಷಣೆ ಹಾಗೂ ಸಹಾಯ ಕೇಳಲು ಹೋದರು. ಜೀವಕೋಟಿಯ ಮೇಲಿನ ಅನುಕಂಪದಿಂದ ಶಿವ ವಿಷವನ್ನು ನುಂಗಿ ತನ್ನ ಕಂಠದಲ್ಲಿ ಹಿಡಿದಿಟ್ಟ. ಇದು ಎಷ್ಟು ತೀಕ್ಷ್ಣವಾದ ವಿಷವೆಂದರೆ ಶಿವನ ಕಂಠವು ನೀಲಿಯಾಗಿ ಹೋಯಿತು. ಈ ಕಾರಣದಿಂದ, ಶಿವನನ್ನು ನೀಲಕಂಠ (ಕಪ್ಪು ಅಥವಾ ನೀಲಿ - ಗಂಟಲಿನವ,ನೀಲ = "ನೀಲಿ", ಕಂಠ = "ಗಂಟಲು") ಎನ್ನುತ್ತಾರೆ.

ರತ್ನಗಳು[ಬದಲಾಯಿಸಿ]

14 ಆಭರಣಗಳೊಂದಿಗೆ ಸಮುದ್ರ ಮಂಥನವನ್ನು ತೋರಿಸುವ 1910 ರ ಲಿಥೋಗ್ರಾಫ್

ಎಲ್ಲ ರೀತಿಯ ಗಿಡಮೂಲಿಕೆಯನ್ನು ಸಮುದ್ರದಲ್ಲಿ ಹಾಕಲಾಯಿತು ಹಾಗೂ ಹದಿನಾಲ್ಕು ರತ್ನಗಳು ಸಮುದ್ರದಿಂದ ಹೊರಬಂದವು, ಇದನ್ನು ದೇವತೆಗಳು ಹಾಗು ಅಸುರರು ಹಂಚಿಕೊಂಡರು. ಸಾಮಾನ್ಯವಾಗಿ ರತ್ನಗಳು ಹದಿನಾಲ್ಕು ಎಂದು ಹೇಳಲ್ಪಟರೂ, ಗ್ರಂಥಗಳಲ್ಲಿ ಒಂಬತ್ತರಿಂದ ಹದಿನಾಲ್ಕರವರಗೆ ಉಲ್ಲೇಖಿಸಲಾಗುತ್ತದೆ. ಪಟ್ಟಿ:[೧]

ಈ ಪಟ್ಟಿ ಒಂದು ಪುರಾಣದಿಂದ ಇನ್ನೊಂದು ಪುರಾಣಕ್ಕೆ ಸ್ವಲ್ಪ ಬಿನ್ನವಾಗಿರುತ್ತದೆ,ಹಾಗೂ ರಾಮಾಯಣ ಮತ್ತು ಮಹಾಭಾರತಗಳಲ್ಲಿಯೂ ಭಿನ್ನವಾಗಿವೆ. ಪಟ್ಟಿಯನ್ನು ಪೂರ್ಣಗೊಳಿಸಲು ಈ ರತ್ನಗಳನ್ನು ಸೇರಿಸಲಾಗುತ್ತದೆ:[೧]

ಚಿರಂತನತೆಯ ಪಾನೀಯ[ಬದಲಾಯಿಸಿ]

ಸಮುದ್ರ ಮಂಥನದ ಹಲವರು ದೃಶ್ಯಗಳು

ಕೊನೆಯಲ್ಲಿ , ಧನ್ವಂತರಿ, ಸ್ವರ್ಗಲೋಕದ ವೈದ್ಯ, ಅಮೃತ ಉಳ್ಳ ಕೊಡದೊಂದಿಗೆ ಹೊರಬಂದ. ದೇವತೆಗಳು ಹಾಗು ಅಸುರರ ನಡುವೆ ಅಮೃತಕ್ಕಾಗಿ ಘೋರ ಯುದ್ಧ ನಡೆಯಿತು. ಅಮೃತವನ್ನು ಅಸುರರಿಂದ ರಕ್ಷಿಸಲು, ದೇವತೆಗಳು ಅಮೃತದ ಕೊಡವನ್ನು ಭೂಮಿಯ ಮೇಲೆ ನಾಲ್ಕು ಜಾಗಗಳಲ್ಲಿ ಬಚ್ಚಿಟ್ಟರು - ಪ್ರಯಾಗ, ಹರಿದ್ವಾರ, ಉಜ್ಜಯನಿ ಹಾಗು ನಾಸಿಕ. ಈ ನಾಲ್ಕು ಜಾಗಗಳಲ್ಲಿ ಒಂದೊಂದು ಹನಿ ಅಮೃತ ಚೆಲ್ಲಿ ಈ ಜಾಗಗಳು ಪುಣ್ಯ ಕ್ಷೇತ್ರಗಳಾದವು. ಈ ಕಾರಣದಿಂದ ಹನ್ನೆರಡು ವರ್ಷಕೊಮ್ಮೆ ಇಲ್ಲಿ ಕುಂಭ ಮೇಳವನ್ನು ಆಚರಿಸಲಾಗುತ್ತದೆ.

ಆದರೆ, ಕೊನೆಗೂ ಅಸುರರ ಕೈಗೆ ಅಮೃತ ಸಿಕ್ಕಿ ಅವರು ಸಂತೋಷ ಕೂಟವನ್ನು ಆಚರಿಸತೊಡಗಿದರು. ಭಯಭೀತರಾದ, ದೇವತೆಗಳು ವಿಷ್ಣುವಿಗೆ ಮನವಿ ಮಾಡಿದರು,ವಿಷ್ಣು ಮೋಹಿನಿ ಅವತಾರವನ್ನು ತಾಳಿ ಅಸುರರನ್ನು ವಿಚಲಿತಗೊಳಿಸಿ ಅಮೃತವನ್ನು ದೇವತೆಗಳಿಗೆ ಹಂಚಿದನು. ರಾಹು ಎಂಬ ಅಸುರನು ದೇವತಾ ರೂಪ ತಾಳಿ ಅಮೃತವನ್ನು ಸೇವಿಸಿದ. ತಮ್ಮ ತೇಜಸ್ಸಿನಿಂದ, ಸೂರ್ಯ ಹಾಗು ಚಂದ್ರ ಇದನ್ನು ಗಮನಿಸಿ, ಮೋಹಿನಿಗೆ ವಿಷಯ ತಿಳಿಸಿದರು. ಅಮೃತವು ಗಂಟಲಿನ ಕೆಳಗಿಳಿಯುವ ಮುನ್ನ, ಮೋಹಿನಿಯು ಸುದರ್ಶನ ಚಕ್ರದಿಂದ ರಾಹುವಿನ ತಲೆ ಉರುಳಿಸಿದಳು. ಅಮೃತ ಸೇವಿಸಿದ ತಲೆ ಚಿರಂಜೀವಿ ಆಯಿತು. ಸೇಡು-ತೀರಿಸಿಕೊಳ್ಳಲು ರಾಹುವಿನ ತಲೆ ಸೂರ್ಯ ಹಾಗು ಚಂದ್ರನನ್ನು ನುಂಗಿ ಗ್ರಹಣವುಂಟು ಮಾಡುತ್ತಾನೆ. ನಂತರ ಸೂರ್ಯ ಅಥವಾ ಚಂದ್ರ ಗಂಟಲಿನಿಂದ ಹೊರಬಂದು ಗ್ರಹಣ ಮುಕ್ತಾಯಗೊಳುತ್ತದೆ.

ಕಥೆಯ ಕೊನೆಯಲ್ಲಿ ಪುನಶ್ಚೇತನಗೊಂಡ ದೇವತೆಗಳು ಅಸುರರನ್ನು ಸೋಲಿಸುತ್ತಾರೆ.

ಆಕರಗಳು[ಬದಲಾಯಿಸಿ]

  1. ೧.೦ ೧.೧ Wilson, Horace Hayman (1840). The Vishnu Purana.

ಬಾಹ್ಯ ಕೊಂಡಿಗಳು[ಬದಲಾಯಿಸಿ]